ಬಿಜಾಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಒಂದು ಗ್ರಾಮ. ಕೃಷ್ಣಾ ನದಿಯ ಎಡದಂಡೆಯ ಮೇಲೆ ಹುಬ್ಬಳ್ಳಿ ಸೊಲ್ಲಾಪುರ ರೈಲುಮಾರ್ಗದಲ್ಲಿ ಬಾಗಲಕೋಟೆಯ ಈಶಾನ್ಯಕ್ಕೆ 32 ಕಿಮೀ ದೂರದಲ್ಲೂ ಬಿಜಾಪುರದ ದಕ್ಷಿಣಕ್ಕೆ ಸು. 65 ಕಿಮೀ ದೂರದಲ್ಲೂ ಇದೆ. ಗ್ರಾಮದ ಪುರ್ವದಲ್ಲಿ ಪರ್ವತಕಟ್ಟಿ ಹಳ್ಳವೂ ರಕ್ಷಿತ ಅರಣ್ಯಪ್ರದೇಶವೂ ಇವೆ. ಆಲಮಟ್ಟಿಯಲ್ಲಿ ಹರ್ಡೇಕರ ಮಂಜಪ್ಪನವರ ಆಶ್ರಮವಿತ್ತು. ಅದು ಸಾಮಾಜಿಕ, ನೈತಿಕ ಮತ್ತು ಸಾಂಸ್ಕೃತಿಕ ಶಿಕ್ಷಣ ಕೊಡುವ ಒಂದು ಗುರುಕುಲವಾಗಿತ್ತು. ಇಂದು ಅವರ ಹೆಸರಿನ ಒಂದು ಪ್ರೌಢಶಾಲೆ ಇದೆ.

ಕೃಷ್ಣಾನದಿ ಮೇಲ್ದಂಡೆ ಮೊದಲಹಂತದ ಯೋಜನೆಯಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ಆಲಮಟ್ಟಿ ಬಳಿ ದೊಡ್ಡ ಅಣೆಕಟ್ಟು ಕಟ್ಟೆ ಕಟ್ಟಲಾಗಿದೆ. ಇದರಿಂದ ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳ ಸು. 3.5ಲಕ್ಷ ಎಕರೆಗಳಿಗೆ ನೀರೊದಗಿಸಲಾಗುತ್ತದೆ. ಕಟ್ಟೆಯ ಹಿಂದಿನ ಜಲಾವೃತ ಪ್ರದೇಶದಲ್ಲಿ ಹಿನ್ನೀರಿನಿಂದ ಬಾಗಲಕೋಟೆ ಪಟ್ಟಣ ಮುಳುಗಡೆಯಾಗಿದ್ದು ಕಟ್ಟೆಯ ಉದ್ದ 15.78ಮೀ. ಗರಿಷ್ಠ ಎತ್ತರ ತಳಪಾಯದಿಂದ 47.80 ಮೀ. ಸಮುದ್ರ ಮಟ್ಟದಿಂದ 519.6ಮೀ ಎತ್ತರವಿದೆ. ಒಟ್ಟು ಜಲಸಂಗ್ರಹ ಸಾಮರ್ಥ್ಯ 5,295 ಮಿಲಿಯನ್ ಘನ ಮೀಟರ್ಗಳು. ಎರಡನೆಯ ಹಂತದಲ್ಲಿ ಮತ್ತೆ ಸು. 2.30 ಲಕ್ಷ ಎಕರೆಗೆ ನೀರು ಒದಗುವುದು.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ